.ಡೆಲವೇರ್ ನದಿ
ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿ ಪೆನ್ಸಿಲ್ವೇನಿಯ ಮತ್ತು ಡೆಲವೇರ್ ರಾಜ್ಯಗಳಲ್ಲಿ ಹರಿದು ಅಟ್ಲಾಂಟಿಕ್ ಸಾಗರವನ್ನು ಸೇರುವ ಒಂದು ನದಿ.  ನದಿಯ ಶಿರೋಭಾಗದ ಮುಖ್ಯವಾದ ಪಶ್ಚಿಮ ಶಾಖೆ ನ್ಯೂಯಾರ್ಕಿನ ಷೋಹಾರೀ ಕೌಂಟಿಯಲ್ಲಿ ಸಮುದ್ರಮಟ್ಟದಿಂದ 1,886' ಎತ್ತರದಲ್ಲಿ ಹುಟ್ಟಿ, ಕ್ಯಾಟ್ಸ್‍ಕಿಲ್ ಪರ್ವತಗಳಿಂದ ಇಳಿದು ಬರುತ್ತದೆ.  ಇತರ ಶಾಖೆಗಳು ನ್ಯೂಯಾರ್ಕಿನ ಗ್ರೀನ್ ಹಾಗೂ ಡೆಲವೇರ್ ಕೌಂಟಿಗಳಲ್ಲಿ ಹುಟ್ಟಿ ಪಶ್ಚಿಮ ಶಾಖೆಯನ್ನು ಕೂಡಿಕೊಂಡು ಆಗ್ನೇಯಕ್ಕೆ ಹರಿದು ಪೆನ್ಸಿಲ್ವೇನಿಯ-ನ್ಯೂ ಯಾರ್ಕ್, ನ್ಯೂ ಜರ್ಸಿ-ಪೆನ್ಸಿಲ್ವೇನಿಯ ಮತ್ತು ಡೆಲವೇರ್-ನ್ಯೂ ಜರ್ಸಿಗಳ ಭಾಗಶಃ ಗಡಿಯಾಗಿ ಹರಿಯುತ್ತದೆ.  ನದಿಯ ಶೀರೋಭಾಗದ ಅತ್ಯಂತ ಉದ್ದವಾದ ಶಾಖೆಯ ಉಗಮಸ್ಥಳದಿಂದ ಇದರ ಉದ್ದ 410 ಮೈ.   ನದಿಯ ಜಲಾನಯನ ಭೂಮಿಯ ವಿಸ್ತೀರ್ಣ 12,300 ಚ.ಮೈ.  ನದಿಯ ಮೇಲ್ದಂಡೆಯ ಪ್ರದೇಶ ಬೆಟ್ಟಕಾಡುಗಳಿಂದ ಕೂಡಿ ಸುಂದರವಾಗಿದೆ.  ಪರ್ವತವನ್ನೂ ಪ್ರಸ್ಥಭೂಮಿಯನ್ನೂ ದಾಟಿದ ಮೇಲೆ ನದಿ ವಿಶಾಲವಾದ ಆಪಲೇಷಿಯನ್ ಕಣಿವೆಗಳ ಮೂಲಕ ಹಾದು, ಹೊಲ ಕಾಡುಗಳಿಂದ ಕೂಡಿದ ಪ್ರಶಾಂತ ಪ್ರದೇಶದಲ್ಲಿ ಮುಂದುವರಿದು ಈಸ್ಟನ್‍ನಲ್ಲಿ ಮತ್ತೆ ಪರ್ವತಸೀಮೆಯನ್ನು ಪ್ರವೇಶಿಸುತ್ತದೆ.  ಅಲ್ಲಲ್ಲಿ ಜಲಪಾತಗಳಿಂದ ಕೂಡಿ ಮುಂದುವರಿಯುತ್ತದೆ.  ಟ್ರೆಂಟನ್ ಬಳಿಯಲ್ಲಿ 8'ಗಳಷ್ಟು ಕೆಳಕ್ಕೆ ಧುಮುಕುತ್ತದೆ.  ಟ್ರೆಂಟಿನಿನಿಂದ ಮುಂದಕ್ಕೆ ಇದು ವಿಶಾಲವಾದ ಅಳಿವೆಯಾಗಿ ಪರಿಣಮಿಸಿ ಡೆಲವೇರ್ ಕೊಲ್ಲಿಯನ್ನು ಸೇರುತ್ತದೆ. 

	ಡೆಲವೇರ್ ನದಿಯ ಪ್ರಮುಖ ಉಪನದಿಗಳು ಮೊಂಗಾಪ್, ನೆವರ್‍ಸಿಂಕ್, ಕ್ಯಾಲಿಕೂನ್, ಲ್ಯಾಕವ್ಯಾಕ್ಸನ್, ಲೀಹೈ, ಸ್ಕೂಲ್ಕಿಲ್, ಕಾಂಕೋಕಾಸ್, ಮಸ್ಕನೆಟ್ಕಾಂಗ್ ಹಾಗೂ ಮಾರಿಸ್.

	ನದಿಯ ದಂಡೆಯ ಮೇಲಣ ಮುಖ್ಯ ನಗರಗಳು ಪೋರ್ಟ್ ಜರ್ವಿಸ್ (ನ್ಯೂ ಯಾರ್ಕ್), ಫಿಲಡೆಲ್ಫಿಯ, ಚೆಸ್ಟರ್ (ಪೆನ್ಸಿಲ್ವೇನಿಯ), ಟ್ರೆಂಟನ್, ಕ್ಯಾಮ್ಡೆನ್ (ನ್ಯೂ ಜರ್ಸಿ), ವಿಲ್ಮಿಂಗ್‍ಟನ್ (ಡೆಲವೇರ್).  ರೈಲ್ವೆ ಸ್ಪರ್ಧೆ ಆರಂಭವಾಗುವುದಕ್ಕೆ (1857) ಹಿಂದೆ ಸರಕುಸಾಗಣೆಯ ದೃಷ್ಟಿಯಿಂದ ನದಿ ವಿಶೇಷ ಪ್ರಾಮುಖ್ಯ ಪಡೆದಿತ್ತು.   ಹಿಂದಣ ನಾಲೆಗಳ ಪೈಕಿ ಈಗಲೂ ಸ್ವಲ್ಪ ಪ್ರಾಮುಖ್ಯ ಉಳಿಸಿಕೊಂಡಿರುವವೆಂದರೆ ಡೆಲವೇರ್ ಮತ್ತು ಕ್ಯಾಂಟನ್ ನದಿಗಳನ್ನು ಸೇರಿಸುವ ಟ್ರೆಂಟನ್-ನ್ಯೂ ಬ್ರನ್ಸ್‍ವಿಕ್ ನಾಲೆ, ಡೆಲವೇರ್ ನದಿ ಮತ್ತು ಚೆಸಪೀಕ್ ಕೊಲ್ಲಿಯನ್ನು ಕೂಡಿಸುವ ಡೆಲವೇರ್-ಚೆಸಪೀಕ್ ನಾಲೆ.  ನದಿಯ ಜಲಾನಯನ ಪ್ರದೇಶದ ರಾಜ್ಯಗಳಾದ ನ್ಯೂ ಯಾರ್ಕ್, ನ್ಯೂ ಜರ್ಸಿ, ಪೆನ್ಸಿಲ್ವೇನಿಯ, ಡೆಲವೇರ್, ಇವುಗಳ ಅಂತರರಾಜ್ಯ ಆಯೋಗವೊಂದು 1936ರಲ್ಲಿ ಸ್ಥಾಪಿತವಾಯಿತು.  ಮಲಿನೀಕರಣದ ನಿಯಂತ್ರಣ ಮತ್ತು ನಿರೋಧ, ನಗರಗಳ ಬಳಕೆಗಾಗಿ ನೀರಿನ ಪೂರೈಕೆಯ ಯೋಜನೆಯ ಪ್ರದೇಶದ ಅಭಿವೃದ್ಧಿ-ಇವು ಆಯೋಗದ ಉದ್ದೇಶಗಳು. 

	ಅಮೆರಿಕನ್ ಸ್ವಾತಂತ್ರ್ಯಯುದ್ಧಕಾಲದಲ್ಲಿ 1776ರ ಕ್ರಿಸ್‍ಮಸ್ ರಾತ್ರಿಯಲ್ಲಿ ಜಾರ್ಜ್ ವಾಷಿಂಗ್ಟನ್ ತನ್ನ 2,400 ಸೈನಿಕರೊಡನೆ ಪೆನ್ಸಿಲ್ವೇನಿಯದಿಂದ ನ್ಯೂ ಜರ್ಸಿಗೆ ಟ್ರೆಂಟನ್‍ಗೆ ಮೇಲೆ 9 ಮೈ. ದೂರದಲ್ಲಿ ಈ ನದಿಯನ್ನು ದಾಟಿ ಹೋಗಿ ಶತ್ರುಪಾಳೆಯದ ಮೇಲೆ ಅನಿರೀಕ್ಷಿತವಾಗಿ ಎರಗಿದ.  ಆ ಸ್ಥಳ ಈಗ ರಾಷ್ಟ್ರೀಯ ಸ್ಮಾರಕವಾಗಿದೆ.
(ವಿ.ಜಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ